ಟ್ರಾಕೈಟ್ -
ಲಘುವರ್ಣದ ಬಲು ನವುರಾದ ಸ್ಫಟಿಕೀಯ (ಆಲ್ಪನಿಟಿಕ್) ಜ್ವಾಲಾಮುಖಿಜ ಶಿಲೆ. ಫ್ರಾನ್ಸಿನ ಓವೇರ್ನ್ ಪ್ರದೇಶದಲ್ಲಿ ಸಿಕ್ಕುವ ಜ್ವಾಲಾಮುಖಿಜ ಶಿಲೆಗಳ ಮೇಲ್ಮೈತುಂಬ ತರಕಲಾಗಿದ್ದುದರಿಂದ ಈ ಶಿಲೆಗಳಿಗೆ ಟ್ರಾಕೈಟ್ ಎಂದು ನಾಮಕರಿಸಲಾಯಿತು (1882). ಗ್ರೀಕ್ ಪದ ಟ್ರಾಕಿಯದ ಅರ್ಥ ಬಲುದೊರಗು ಎಂದು). ಅಂದಿನಿಂದ ಸುಮಾರು ಮೂವತ್ತು ವರ್ಷಗಳವರೆಗೆ ಈಗಿನ ಫೆಲ್ಸೈಟ್, ರೈಯೋಲೈಟ್, ಟ್ರಾಕೈಟ್, ಡೇಸೈಟ್ ಮತ್ತು ಆಂಡಿಸೈಟ್ ಶಿಲೆಗಳನ್ನು ಒಳಗೊಂಡ ತೆಳುಬಣ್ಣದ ಎಲ್ಲ ಜ್ವಾಲಾಮುಖಿಜ ಶಿಲೆಗಳನ್ನೂ ಈ ಹೆಸರಿನಿಂದ ಕರೆಯಲಾಗುತ್ತಿತ್ತು. ಆದರೆ ಇಂದು ಇದು ಸೈಯ ನೈಟ್ ಅಂತರಾಗ್ನಿಶಿಲೆಗೆ ಸಮವಾದ ಖನಿಜ ಸಂಯೋಜನೆಯುಳ್ಳ ಜ್ವಾಲಾಮುಖಿಜ ಶಿಲೆಗಳಿಗೆ ಮಾತ್ರ ಸೀಮಿತವಾಗಿದೆ. ಟ್ರಾಕೈಟ್ ಪ್ರಧಾನವಾಗಿ ಸ್ಯಾನಿಡೀನ್ ವರ್ಣರಹಿತ ಫೆಲ್‍ಸ್ಟಾರಿನಿಂದ ರಚಿತವಾಗಿದೆ. ಇದರಲ್ಲಿ ಸ್ಯಾನಿಡೀನ್ ಖನಿಜದ ಎರಡು ಸಂತತಿಗಳಿವೆ. ಮೊದಲನೆಯ ಸಂತತಿಗೆ ಸೇರಿದ ಬೃಹತ್ ಸ್ಫಟಿಕಗಳು ಎರಡನೆಯ ಸಂತತಿಗೆ ಸೇರಿದ ಸೂಕ್ಷ್ಮವಾದ ಅಪೂರ್ಣ ಸ್ಫಟಿಕಗಳಿಂದ ರಚಿತವಾದ ಮಾತೃಕೆಯಲ್ಲಿ ಹಂಚಿರುತ್ತವೆ. ಮಾತೃಕೆಯಲ್ಲಿ ಸ್ಯಾನಿಡೀನ್ ಅಲ್ಲದೆ ಆಲಿಗೂಕ್ಲೇಸ್ ಮತ್ತು ಟ್ರೆಡಿಮೈಟ್ ಖನಿಜಗಳೂ ಅಲ್ಪ  ಪ್ರಮಾಣದಲ್ಲಿ ಉಂಟು. ವರ್ಣಯುಕ್ತ ಖನಿಜಗಳ ಪೈಕಿ ಅಗೈಟ್ ಸರ್ವ ಸಾಮಾನ್ಯವಾದರೂ ಹಾರ್ನ್‍ಬ್ಲೆಂಡ್ ಮತ್ತು ಬೈಯೊಟೈಟ್ ಖನಿಜಗಳೂ ವಿರಳವಲ್ಲ. ಶಿಲಾರಸದ ಪ್ರವಾಹದಿಂದ ಉದ್ಭವಿಸುವ ಪಟ್ಟೆರಚನೆ ಮತ್ತು ಮೇಲೆ ವಿವರಿಸಿದ ಫಾರ್‍ಫಿರಿಟಿಕ್ ಒಳರಚನೆ ಟ್ರಾಕೈಟ್ ಶಿಲೆಗಳ ವಿಶಿಷ್ಟ ಲಕ್ಷಣ. ಇವುಗಳ ಇನ್ನೊಂದು ವೈಶಿಷ್ಟ್ಯವೆಂದರೆ ಮಾತೃಕೆಯಲ್ಲಿರುವ ದಬ್ಬೆಯಾಕಾರದ ಸೂಕ್ಷ್ಮ ಫೆಲ್‍ಸ್ಟಾರ್ ಸ್ಫಟಿಕಗಳು ಶಿಲಾರಸಪ್ರವಾಹದಿಂದ ಹೆಚ್ಚು ಕಡಿಮೆ ಸಮಾಂತರವಾಗಿ ಸಾಲುಗೊಂಡಿರುತ್ತವೆ. ಆದ್ದರಿಂದ ಈ ರಚನೆಗೆ ಟ್ರಾಕಿಟಿಕ್ ಒಳರಚನೆ ಎಂಬ ಹೆಸರಿದೆ.

	ಟ್ರಾಕೈಟ್ ಶಿಲೆಗಳು ನವೀನ ಜೀವಕಲ್ಪ ಶಿಲಾಸ್ತೋಮಗಳಿಗೆ ಸೇರಿದ ಇತರ ಜ್ವಾಲಾಮುಖಿಜ ಶಿಲೆಗಳೊಡಗೂಡಿ ಯೂರೋಪ್, ಅಮೆರಿಕ, ಆಫ್ರಿಕ, ಭಾರತ ಮುಂತಾದ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿವೆ. ಭಾರತದಲ್ಲಿ ಇವು ಪಶ್ಚಿಮ ಕರಾವಳಿ ಪ್ರದೇಶದಲ್ಲಿರುವ ಸಾಲ್‍ಸಿಟಿ ದ್ವೀಪ ಮತ್ತು ಮುಂಬಯಿ ಸುತ್ತಮುತ್ತಣ ಖರೋಡಿ ಮತ್ತು ಮಲಾಡ್ ದ್ವೀಪಗಳಲ್ಲಿ ಬೆಸಾಲ್ಟ್ ಶಿಲಾಪಾಕದ ಭೇದೋತ್ಪನ್ನಗಳಾಗಿ (ಡಿಫರೆನ್ಷಿಯೇಟ್ಸ್) ದೊರೆಯುತ್ತವೆ. ಇತರ ಜ್ವಾಲಾಮುಖಿಜ ಶಿಲೆಗಳಿಗಿಂತ ಇವುಗಳ ಆಕರ್ಷಕ ತೆಳುಬಣ್ಣದ ಕಾರಣದಿಂದ ಟ್ರಾಕೈಟುಗಳಿಗೆ ಕಟ್ಟಡ ನಿರ್ಮಾಣದಲ್ಲಿ ಹೆಚ್ಚಿನ ಬೇಡಿಕೆ ಉಂಟು. ಮುಂಬಯಿ ರೇವು ಪ್ರದೇಶದಲ್ಲಿ ನಿರ್ಮಿಸಿರುವ ಭಾರತದ ಮಹಾದ್ವಾರ ಸ್ಮಾರಕವನ್ನು ಈ ಶಿಲೆಗಳಿಂದ ರಚಿಸಿದೆ.
(ಜಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ